ವಾಸ್ತವವಾದ : - 
	ಪ್ರಮುಖ ತತ್ತ್ವಶಾಸ್ತ್ರೀಯ ಚಿಂತನಾ ಕ್ರಮಗಳ ಲ್ಲೊಂದು. ಕಾಲ್ಪನಿಕ ಹಾಗೂ ಆದರ್ಶಹೇಳಿಕೆಗಳಿಂದ ದೂರವಿರುವುದು, ಸುಳ್ಳು ಹೇಳಿಕೆಯಿಂದ ಮುಕ್ತವಾಗಿರುವುದು, ಅಂಕಿಅಂಶಗಳಿಂದ ಕೂಡಿರುವುದು, ಕಟು ಸತ್ಯವನ್ನು ಸ್ವಲ್ಪವೂ ವಿರೂಪಗೊಳಿಸದೆ ಇದ್ದಂತೆಯೇ ಹೇಳುವುದು ವಾಸ್ತವವಾದ ಎನಿಸುತ್ತದೆ. ಈ ಅರ್ಥದಲ್ಲಿ ಇದು  ಯಥಾಸ್ಥಿತಿಯ, ವಸ್ತುನಿಷ್ಠ ನಿರೂಪಣೆ. ಇಂಗ್ಲಿಷಿನ ರಿಯಲಿಸಂ ಪದಕ್ಕೆ ಇದು ಸಂವಾದಿಯಾದದ್ದು. 

	ಜ್ಞಾನಮೀಮಾಂಸೆಯಲ್ಲಿ ವಾಸ್ತವವಾದ ಎಂಬ ಪದಕ್ಕೆ ನಿರ್ದಿಷ್ಟ ಅರ್ಥವಿದೆ. ಒಂದು ವಸ್ತುವಿಗೆ ತನ್ನದೇ ಆದ ಅಸ್ತಿತ್ವವಿದೆ; ಅದು ಅಸ್ತಿತ್ವದಲ್ಲಿರುವುದಕ್ಕೂ ಮನಸ್ಸಿನಿಂದ ಅದನ್ನು ಗುರುತಿಸುವುದಕ್ಕೂ ಯಾವ ಸಂಬಂಧವೂ ಇಲ್ಲ. ಮನಸ್ಸು ವಸ್ತುವನ್ನು ಗುರುತಿಸಲಿ, ಬಿಡಲಿ ವಸ್ತು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಉದಾಹರಣೆಗೆ ಕಲ್ಲು, ಮಣ್ಣು, ಝರಿ, ನದಿ, ಬೆಟ್ಟ ಗುಡ್ಡ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿವೆ. ಯಾವುದೇ ಕಾಲದಲ್ಲಿ, ಯಾವುದೇ ಕಾರಣಕ್ಕಾಗಲಿ ಇವು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. 

	ಈ ವಾದದಲ್ಲಿ ಸರಳ ವಾಸ್ತವವಾದ ಮತ್ತು ವಿಮರ್ಶನಾತ್ಮಕ ವಾಸ್ತವವಾದಗಳೆಂಬ ವಿಧಗಳಿವೆ. ಸರಳವಾಸ್ತವವಾದವನ್ನು ಜನಸಾಮಾ ನ್ಯರಿಗೂ ವಿಮರ್ಶನಾತ್ಮಕ ವಾಸ್ತವವಾದವನ್ನು ದಾರ್ಶನಿಕರಿಗೂ ಅನ್ವಯಿಸ ಲಾಗುತ್ತದೆ. ನ್ಯಾಯ-ವೈಶೇಷಿಕ, ಸಾಂಖ್ಯ-ಯೋಗ, ಪೂರ್ವಮೀಮಾಂಸ, ವಿಶಿಷ್ಟಾದ್ವೈತ, ದ್ವೈತ, ದ್ವೈತಾದ್ವೈತ ಹಾಗೂ ಶುದ್ಧ ಅದ್ವೈತದರ್ಶನಗಳು ಈ ವಾದವನ್ನು ಪ್ರತಿಪಾದಿಸುತ್ತವೆ. ಶಂಕರರ ಅದ್ವೈತದರ್ಶನದಲ್ಲಿ ಪ್ರಾರಂಭದಲ್ಲಿ ಇದ್ದ ವಾಸ್ತವವಾದ ಅಂತಿಮವಾಗಿ ಚಿತ್ಪ್ರಧಾನವಾಗಿ ಪರಿಣಮಿಸುತ್ತದೆ. ನ್ಯಾಯ-ವೈಶೇಷಿಕ ದರ್ಶನ ಸಪ್ತಪದಾರ್ಥ ಹಾಗೂ ನವದ್ರವ್ಯಗಳನ್ನು ವಾಸ್ತವ ತತ್ತ್ವಗಳೆಂದು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಪಾಶ್ಚಾತ್ಯರಲ್ಲಿ ಲಾಕ್, ಬರ್ಗ್‍ಸನ್, ಮಾರ್ಗನ್ ಅಲೆಕ್ಸಾಂಡರ್ ಮುಂತಾದ ವರು ಪ್ರಮುಖ ವಾಸ್ತವವಾದಿಗಳಾಗಿದ್ದಾರೆ. ವಸ್ತುವಿನ ಇರುವಿಕೆ ಯಲ್ಲಿಯೇ ಅದರ ವಾಸ್ತವತೆ ಇದೆ. ವಾಸ್ತವತೆಯನ್ನು ಹೊರಗಿನಿಂದ ಗುರುತಿಸಲು ಸಾಧ್ಯವಿಲ್ಲ. ಈ ವಾದ, ಮೌಲ್ಯಗಳಿಗೂ ಅನ್ವಯಿಸುತ್ತದೆ. ಮೌಲ್ಯಗಳು ಮೂರ್ತವಾದುವಲ್ಲ. ಅವು ವಸ್ತುವಿನ ಗುಣಗಳು.  ಉದಾಹರಣೆಗೆ ಸಿಹಿ, ಸಕ್ಕರೆಯ ಗುಣ. ಇದು ಸಕ್ಕರೆಗೆ ಆಂತರಿಕವಾದುದು. ಸಕ್ಕರೆ ತನ್ನ ವಾಸ್ತವ ಗುಣವಾದ ಸಿಹಿಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಇದೇ ರೀತಿ ವಸ್ತುವಿನ ಆಂತರಿಕ ಗುಣದಲ್ಲಿಯೇ ವಾಸ್ತವ ಅಡಗಿರುತ್ತದೆ ಎಂಬುದು ಈ ವಾದದ ತಿರುಳು.	
				(ವಿ.ಎನ್.ಎಸ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ